ಈ ವಿಷಯದ ಕುರಿತು ನಾವೇಕೆ ಮಾತಾಡಬಾರದು?

ಇಷ್ಟೇ ಆಕೆ ಬರೆದದ್ದು. ಜತೆಗೆ ಸಿಎನ್ ಎನ್ ಸುದ್ದಿಸಂಸ್ಥೆ ಭಾರತದಲ್ಲಿ ನಡೆಯುತ್ತಿರುವ ರೈತ ಹೋರಾಟದ ಕುರಿತು ಮಾಡಿರುವ ವಿಸ್ತ್ರತ ವರದಿಯ ಲಿಂಕ್ ಶೇರ್ ಮಾಡಿದ್ದರು. ನೋಡನೋಡುತ್ತಿದ್ದಂತೆ ಅದು ಲಕ್ಷಾಂತರ ರೀಟ್ವೀಟ್ ಗಳಾದವು. #Rihanna ಮತ್ತು #FarmersProtest ಹ್ಯಾಶ್ ಟ್ಯಾಗ್ ಗಳು ಜಾಗತಿಕ ಟ್ರೆಂಡ್ ಆದವು.

ಆಕೆ ರಿಹಾನಾ. ಜಗತ್ತಿನ ಪ್ರಖ್ಯಾತ ಪಾಪ್ ಗಾಯಕಿ. ಟ್ವಿಟರ್ ಒಂದರಲ್ಲೇ ಆಕೆಯ ಅನುಯಾಯಿಗಳ ಸಂಖ್ಯೆ ಹತ್ತು ಕೋಟಿ! ಒಂಭತ್ತು ಗ್ರಾಮಿ ಅವಾರ್ಡ್, ಹದಿಮೂರು ಅಮೆರಿಕನ್ ಮ್ಯೂಸಿಕ್ ಅವಾರ್ಡ್, ಹನ್ನೆರಡು ಬಿಲ್ ಬೋರ್ಡ್ ಮ್ಯೂಸಿಕ್ ಅವಾರ್ಡ್ ಜತೆಗೆ ಆರು ಗಿನ್ನೆಸ್ ದಾಖಲೆಗಳು ಈಕೆಯ ಮಡಿಲಲ್ಲಿವೆ! ಜಗತ್ತಿನ ಯಾವುದೇ ಮಹಿಳಾ ಸಂಗೀತಗಾರ್ತಿಗಿಂತ ಹೆಚ್ಚು ಶ್ರೀಮಂತೆ ಈಕೆ. ಟೈಂ ಮ್ಯಾಗಜೀನ್ ನ ಜಗತ್ತಿನ ಅತಿಹೆಚ್ಚು ಪ್ರಭಾವಶಾಲಿ ಸೆಲೆಬ್ರಿಟಿಗಳಲ್ಲಿ ಈಕೆ ಹಲವಾರು ವರ್ಷ ಖಾಯಂ ಸ್ಥಾನ ಪಡೆದಿದ್ದಾರೆ. ಆಕೆಯ ಆಸ್ತಿಯ ಒಟ್ಟು ಮೌಲ್ಯ ಎಷ್ಟು ಗೊತ್ತೇ? 600 ಮಿಲಿಯನ್ ಡಾಲರ್!

ರಿಹಾನಾ ಕೆರೆಬಿಯನ್ ದ್ವೀಪ ಸಮೂಹದ ಬಾರ್ಬಡೋಸ್ ಎಂಬ ದೇಶದವರು. ಆಕೆಯ ಬಾಲ್ಯವೇ ಆಘಾತಕಾರಿಯಾಗಿತ್ತು. ಕುಡುಕ ಅಪ್ಪ ದಿನವೂ ಈಕೆಯ ತಾಯಿಯನ್ನು ಹೊಡೆಯುತ್ತಿದ್ದ. ರಿಹಾನಾಗೆ ವಿಪರೀತ ತಲೆನೋವು. ಅಮ್ಮ ಅಕೌಂಟೆಂಟ್, ಅಪ್ಪ ವೇರ್ ಹೌಸ್ ಒಂದರ ಸೂಪರ್ ವೈಜರ್. ಸಣ್ಣ ವಯಸ್ಸಿನಲ್ಲೇ ರಿಹಾನ ಬಟ್ಟೆ ವ್ಯಾಪಾರ ಮಾಡುತ್ತಿದ್ದಳು. ಕುಡುಕ ಅಪ್ಪ ಕೊಕೈನ್ ಗೆ ಅಡಿಕ್ಟ್ ಆಗಿದ್ದ. ಪ್ರತಿನಿತ್ಯ ಮನೆ ರಣರಂಗವಾಗುತ್ತಿತ್ತು, ರಿಹಾನಾಳ ತಲೆನೋವೂ ನಿಯಂತ್ರಣಕ್ಕೆ ಬರುತ್ತಿರಲಿಲ್ಲ. ಕೊನೆಗೊಂದು ದಿನ ಈಕೆಗೆ ಹದಿನಾಲ್ಕು ವರ್ಷವಾಗಿದ್ದಾಗ ಅಪ್ಪ-ಅಮ್ಮ ಬೇರೆಯಾದರು. ರಿಹಾನಾಳ ತಲೆನೋವು ಸಂಪೂರ್ಣ ನಿಂತುಹೋಯಿತು!

ರಿಹಾನಾಗೆ ಸಂಗೀತದಲ್ಲಿ ಆಸಕ್ತಿಯಿತ್ತು. ನೀವು ಹೆಸರಾಂತ ಕ್ರಿಕೆಟಿಗರಾದ ಕ್ರಿಸ್ ಜೋರ್ಡಾನ್, ಕಾರ್ಲೋಸ್ ಬ್ರಥ್ ವೈಟ್ ಹೆಸರು ಕೇಳಿರುತ್ತೀರಿ. ಅವರ ಜತೆಯಲ್ಲೇ ಈಕೆ ಶಾಲೆಯಲ್ಲಿ ಓದಿದವಳು. 2003ರಲ್ಲಿ ರಿಹಾನ ತನ್ನ ಇಬ್ಬರು ಗೆಳತಿಯರೊಂದಿಗೆ ಸೇರಿ ಸಣ್ಣ ತಂಡ ಮಾಡಿಕೊಂಡು ಸಂಗೀತಾಭ್ಯಾಸ ಆರಂಭಿಸಿದಳು. ಅಮೆರಿಕದ ಮ್ಯೂಸಿಕ್ ಪ್ರೊಡ್ಯೂಸರ್ ಇವಾನ್ ರೋಜರ್ಸ್ ಎಂಬಾತನ ಕಣ್ಣಿಗೆ ಬಿತ್ತು ಈ ತಂಡ. ಆ ನಂತರ ರಿಹಾನಾಳ ಬದುಕಲ್ಲಿ ನಡೆದಿದ್ದೆಲ್ಲ ಪವಾಡ. ಆಕೆ ಮುಟ್ಟಿದ್ದೆಲ್ಲ ಚಿನ್ನ. ಸಂಗೀತ ಜಗತ್ತು ಅವಳನ್ನು ಆರಾಧಿಸಿತು. ಆಕೆ ಇಡೀ ಜಗತ್ತು ಸುತ್ತಿದಳು. ಹತ್ತಾರು ಮ್ಯೂಸಿಕ್ ಆಲ್ಬಮ್ ಗಳು ಜನಪ್ರಿಯವಾದವು. ಹಣ, ಪ್ರಶಸ್ತಿ, ಖ್ಯಾತಿ ಎಲ್ಲವೂ ಆಕೆಯನ್ನು ಮುತ್ತಿಕೊಂಡವು. 2008ರ ಫೆಬ್ರವರಿ 22 ರಂದು ಅಂದಿನ ಬಾರ್ಬಡೋಸ್ ಸರ್ಕಾರ ರಿಹಾನಾಗೆ ಗೌರವ ನೀಡಲೆಂದು “ರಿಹಾನಾ ದಿನಾಚರಣೆ” (ರಿಹಾನಾ ಡೇ) ಆಚರಿಸಿತು. ಅದಾದ ನಂತರ ಪ್ರತಿವರ್ಷ ಫೆ.22ರಂದು ಬಾರ್ಬಡೋಸ್ ದೇಶದಲ್ಲಿ ರಿಹಾನಾ ಡೇ ಆಚರಿಸಲಾಗುತ್ತಿದೆ. ಬದುಕಿರುವಾಗಲೇ, ಅದೂ ಇಷ್ಟು ಸಣ್ಣ ವಯಸ್ಸಿಗೆ ಇಂಥ ಗೌರವ ಎಷ್ಟು ಜನರಿಗೆ ಸಿಕ್ಕೀತು ಹೇಳಿ?

ಇಂಥ ರಿಹಾನಾ ಈಗ ಭಾರತೀಯ ರೈತರ ಪರವಾಗಿ ಮಾತನಾಡಿದ್ದಾರೆ, ಅದು ಈಗ ಜಾಗತಿಕ ಸುದ್ದಿ. ರಿಹಾನಾ ಬೆನ್ನಲ್ಲೇ ಹಲವು ಜಾಗತಿಕ ಸೆಲೆಬ್ರಿಟಿಗಳು ಭಾರತದ ರೈತರ ಪ್ರತಿಭಟನೆಗಳನ್ನು ಬೆಂಬಲಿಸಿ ಹೇಳಿಕೆ ನೀಡುತ್ತಿದ್ದಾರೆ. ನಮ್ಮ ರೈತರ ಕೂಗಿಗೆ ಆನೆ ಬಲ ಬಂದಂತಾಗಿದೆ.‌

ಅಂದಹಾಗೆ ರಿಹಾನಾ ಈ ರೀತಿಯಲ್ಲಿ ಜಾಗತಿಕ ವಿದ್ಯಮಾನಗಳಿಗೆ ಸ್ಪಂದಿಸುವುದು ಹೊಸದೇನೂ ಅಲ್ಲ. ಸೂಡಾನ್, ನೈಜೀರಿಯಾಗಳಲ್ಲಿ ನಡೆಯುತ್ತಿರುವ ಸಾಮಾಜಿಕ ನ್ಯಾಯದ ಹೋರಾಟಗಳನ್ನು ಆಕೆ ಬೆಂಬಲಿಸಿದ್ದರು. ಮ್ಯಾನ್ಮಾರ್ ನ ಬೆಳವಣಿಗೆಗಳ ಕುರಿತೂ ಆಕೆ ಧ್ವನಿ ಎತ್ತಿದ್ದಾರೆ. ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ನಂತರ ನಡೆದ ಐತಿಹಾಸಿಕ ಮಹಿಳಾ ರ‌್ಯಾಲಿಯಲ್ಲಿ ರಿಹಾನಾ ಭಾಗವಹಿಸಿದ್ದರು. ಹಲವಾರು ದೇಶಗಳ ಜನರಿಗೆ ವೀಸಾ ನಿರ್ಬಂಧಿಸಿದ ಟ್ರಂಪ್ ಸರ್ಕಾರದ ನಡೆಯನ್ನೂ ಅವರು ಹಿಂದೆ ಕಟುವಾಗಿ ಟೀಕಿಸಿದ್ದರು.

ಭಾರತದ ರೈತ ಹೋರಾಟದ ಕುರಿತು ರಿಹಾನಾ ನೀಡಿರುವ ಹೇಳಿಕೆ ಈಗ ‘ಗೇಮ್ ಚೇಂಜರ್’ ಎಂದೇ ಭಾವಿಸಲಾಗುತ್ತಿದೆ. ರಷ್ಯಾ, ಬ್ರೆಜಿಲ್ ಮತ್ತು ಭಾರತದಲ್ಲಿ ಈ ಶತಮಾನದ ಬಹುದೊಡ್ಡ ಜನಹೋರಾಟಗಳು ನಡೆಯುತ್ತಿವೆ. ಆದರೆ ರಷ್ಯಾದ ಪ್ರತಿಭಟನೆಗಳಿಗೆ ಸಿಕ್ಕಷ್ಟು ಮಹತ್ವ ಭಾರತದ ರೈತರ ಪ್ರತಿಭಟನೆಗಳಿಗೆ ದೊರಕಿರಲಿಲ್ಲ. ಈಗ ರಿಹಾನಾ ಅವರ ಒಂದು ಟ್ವೀಟ್ ಎಲ್ಲವನ್ನೂ ಬದಲಿಸಿದೆ.

ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ ಒತ್ತಡ, ಮುಜುಗರಗಳಿಂದ ತಪ್ಪಿಸಿಕೊಳ್ಳಲು ಇರುವುದು ಏಕೈಕ ದಾರಿ, ರೈತರ ದಾರಿಯಲ್ಲಿ ಕಬ್ಬಿಣದ ಮುಳ್ಳುಗಳನ್ನು ನೆಡುವುದಲ್ಲ. ರೈತರು ಇಟ್ಟಿರುವ ಎರಡೇ ಬೇಡಿಕೆಗಳನ್ನು ಈಡೇರಿಸುವುದು. ಮೂರು ಕರಾಳ ಕೃಷಿ ಕಾನೂನುಗಳನ್ನು ಹಿಂದಕ್ಕೆ ಪಡೆಯಬೇಕು, ಎಂಎಸ್ ಪಿಗೆ ಕಾನೂನಿಗೆ‌ ಬಲ ನೀಡಬೇಕು. ರೈತರು ಇನ್ನೇನೂ ಕೇಳುತ್ತಿಲ್ಲ.

ಅದಕ್ಕೆ ಹೊರತಾಗಿ ಸರ್ಕಾರ ಬೇರೆ ಏನನ್ನು ಮಾಡಿದರೂ ಜಗತ್ತಿನಾದ್ಯಂತ ಟೀಕೆಗಳಿಗೆ ಒಳಪಡಲಿದೆ ಮತ್ತು ಇದರ ಪರಿಣಾಮವಾಗಿ ನಮ್ಮ ದೇಶದ ಹೆಸರು, ಮೌಲ್ಯವನ್ನೂ ಕಡಿಮೆ ಮಾಡಿದ ಜವಾಬ್ದಾರಿಯನ್ನು ಮೋದಿ ಸರ್ಕಾರವೇ ಹೊರಬೇಕಾಗುತ್ತದೆ.

– ದಿನೇಶ್ ಕುಮಾರ್ ಎಸ್.ಸಿ.

Leave a Comment

Your email address will not be published.