ಕರಾವಳಿಯ ಆ ಎರಡು ಘಟನೆ – ಒಂದೇ ಮನಸ್ಥಿತಿ!

ಸಂಜೆ ಹೊತ್ತು ಕುಳಿತು ಮೊಬೈಲ್ ಸ್ಕ್ರೋಲ್ ಮಾಡುತ್ತಿರುವಾಗ ಎರಡು ವೀಡಿಯೋ ಗಳು ಗಮನ ಸೆಳೆದವು. ಮೊದಲನೆಯ ವೀಡಿಯೋದಲ್ಲಿ ಒಂದು ಪ್ರದೇಶದಲ್ಲಿ ಇಬ್ಬರು ಹುಡುಗರು, ಇಬ್ಬರು ಹುಡುಗಿಯರು ಕುಳಿತುಕೊಂಡು ಸ್ಮ್ಯಾಕ್ಸ್ ತಿನ್ನುತ್ತಿದ್ದರು. ತಕ್ಷಣ ಅತ್ತ ಬಂದ ಕೆಲವರು ಮೊಬೈಲ್ ನಲ್ಲಿ ವೀಡಿಯೋ ಸೆರೆ ಹಿಡಿಯುತ್ತ ಅಲ್ಲಿ ಕುಳಿತ್ತಿದ್ದ ಮುಸ್ಲಿಮ್ ಹುಡುಗಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಅವಳು ಆ ಸಮಯದಲ್ಲಿ ಬುರ್ಖಾ ಬದಿಯಲ್ಲಿಟ್ಟು ಕುಳಿತ್ತಿದ್ದಳು. ಮೊದಲು ಅವಳಿಗೆ ಬುರ್ಖಾ ತಕ್ಷಣ ಧರಿಸುವಂತೆ ಒತ್ತಾಯಿಸುತ್ತಾರೆ.ಹೆದರಿದ ಆ ವಿದ್ಯಾರ್ಥಿನಿ ಬುರ್ಖಾ ಧರಿಸುತ್ತಾಳೆ. ಅವಳೊಂದಿಗಿದ್ದ ಸಹಪಾಠಿಗಳಿಗೂ ತಂಡ ಸ್ವಲ್ಪ ಗಟ್ಟಿ ಧ್ವನಿಯಲ್ಲೇ ಗದರಿಸುತ್ತದೆ.‌

ನಂತರ ಮತ್ತೆ ಕೆಳಗೆ ಸ್ಕ್ರೋಲ್ ಮಾಡಿದಾಗ  ಬೀಚ್’ವೊಂದರಲ್ಲಿ ಒರ್ವ ಮುಸ್ಲಿಮ್ ವ್ಯಕ್ತಿ ನಮಾಝ್ ಸಮಯವಾದ ಕಾರಣ ನಮಾಝ್ ನಿರ್ವಹಿಸುತ್ತಿರುವ ದೃಶ್ಯ ಮತ್ತು ಆ ಬೀಚ್ ನಿರ್ವಹಕರು ಆಕ್ಷೇಪಿಸುತ್ತಿರುವ ದೃಶ್ಯ.

ಈ ಎರಡು ವೀಡಿಯೋಗಳು ಬೇರೆ ಬೇರೆ ಘಟನಾ ಸ್ಥಳಗಳಲ್ಲಿ ಬೇರೆ ವ್ಯಕ್ತಿಗಳಿಂದ ನಡೆದ ಘಟನೆಯಾಗಿದ್ದರೂ ಈ ವೀಡಿಯೋದಲ್ಲಿ ಆಕ್ಷೇಪ ವ್ಯಕ್ತಪಡಿಸಿದ ವ್ಯಕ್ತಿಗಳ ಮನಸ್ಥಿತಿ ಮಾತ್ರ ನನಗೆ ಒಂದೇ ತರನಾಗಿ ಕಂಡಿತು. ಸಾರ್ವಜನಿಕ ಸ್ಥಳದಲ್ಲಿ ಸಹಪಾಠಿಗಳು ಅಥವಾ ಸ್ನೇಹಿತರು ಕೂತು ಸ್ನ್ಯಾಕ್ಸ್ ತಿನ್ನುವುದು ಅಪರಾಧವಾಗಿ ಕಂಡ ಮನಸ್ಥಿತಿ ಮತ್ತು ಸಾರ್ವಜನಿಕ ಸ್ಥಳದಲ್ಲಿ ತನ್ನಷ್ಟಕ್ಕೆ ನಮಾಝ್ ಮಾಡುವುದು ಅಪರಾಧವಾಗಿ ಕಂಡ ಮನಸ್ಥಿತಿಗಳನ್ನು ಈ ಸಂದರ್ಭದಲ್ಲಿ ಬೇರ್ಪಡಿಸಲು ಸಾಧ್ಯವೇ ಇಲ್ಲ.

ಈ ಎರಡು ಮನಸ್ಥಿತಿಗಳು ಈ ಮುಂಚೆ ಇರಲೇ‌ ಇಲ್ಲ ಎಂದು ನಾನು ವಾದಿಸಲು ಹೋಗುವುದಿಲ್ಲ. ಆದರೆ ಅದು ಇತ್ತೀಚ್ಚಿಗೆ ವ್ಯಾಪಕ ಆಗುತ್ತಿದೆ. ಅದು ಎಷ್ಟರ ಮಟ್ಟಿಗೆ ಎಂದರೆ ತಾವು ಮಾಡುತ್ತಿರುವ ಕೃತ್ಯದ ಒಂದು ಚೂರು ಅಪರಾಧ ಮನೋಭಾವ ಇಲ್ಲದೇ ವೀಡಿಯೋ ಮಾಡಿ ವೈರಲ್ ಮಾಡುವಷ್ಟು!. ಇಷ್ಟೊಂದು ಅಸಹಿಷ್ಣುತೆಯ ಮನಸ್ಸುಗಳನ್ನು ಸೃಷ್ಟಿಸಿದ ಸಿದ್ಧಾಂತವಾದರೂ ಯಾವುದು?

ಭಾರತ ದೇಶದ ಸಂವಿಧಾನದ ಅಡಿಯಲ್ಲಿ ಬದುಕುವ ನಾವು ಇನ್ನೊಬ್ಬರ ವೈಯಕ್ತಿಕ ಬದುಕನ್ನು ನಮ್ಮ ವಿಚಾರಧಾರೆಯಂತೆ ಬಲವಂತವಾಗಿ ಬದಲಾಯಿಸಲು ಯತ್ನಿಸುವ ಈ ಮನಸ್ಥಿತಿಗಳ ಸಿದ್ಧಾಂತ ಒಂದೇಯಾಗಿದೆ ಅದು ಕ್ರೌರ್ಯ. ಒರ್ವ ಬಾಲಕ ಇತ್ತೀಚೆಗೆ ದೇವಾಲಯದಲ್ಲಿ ನೀರು ಕುಡಿದ ಕಾರಣಕ್ಕೆ ಭೀಕರವಾಗಿ ಹಲ್ಲೆಗೊಳಗಾದ ಆದರೆ ಅದು ದೂರದ ರಾಜ್ಯದಲ್ಲಿ ನಡೆದ ಕಾರಣಕ್ಕೆ ಅಲ್ಲಿನ ಜನವೇ ಹಾಗೆ ಎಂದು ಬಹುತೇಕ ಜನ ಮಾತನಾಡತೊಡಗಿದರು. ಆದರೆ ದೂರದ ಮನಸ್ಥಿತಿ ಆ ಬಾಲಕನ ವೀಡಿಯೋ ಅಷ್ಟೇ ವೇಗದಲ್ಲಿ ಕರಾವಳಿಯ ಊರು ಕೇರಿಗಳಲ್ಲಿ ಪಸರಿಸುತ್ತಿದೆಯಲ್ಲ ಎಂಬ ಆತಂಕ ಸಹಜವಾಗಿ ನನ್ನಲ್ಲಿ ಮೂಡುತ್ತಿದೆ. ಯಾವುದೇ ಸಿದ್ಧಾಂತ, ನಿಯಮಗಳನ್ನು ನಾನು ಪಾಲಿಸಿದಂತೆ ಇನ್ನೊಬ್ಬರು ಪಾಲಿಸಬೇಕು ಎಂದು ಹೇರುವುದಿದೆಯೆಲ್ಲ ಅದೇ ಕ್ರೌರ್ಯ. ಈ ಮೇಲೆ ವಿವರಿಸಿದ ಎರಡು ವೀಡಿಯೋ ಈ ದೇಶದ ಪ್ರಸ್ತುತ ಪರಿಸ್ಥಿತಿಗೆ ಹಿಡಿದ ಕೈಗನ್ನಡಿ.

ಈ ಎರಡು ಘಟನೆಗಳು ನನಗೆ ಸಹಜವಾಗಿ ಕಾಲೇಜಿನ ದಿನಗಳನ್ನು ನೆನಪಿಸಿದವು. ಅಲ್ಲಿ ಜಾತಿ ಮತ, ಲಿಂಗ ಬೇಧದ ಹೊರತಾಗಿ ಎಲ್ಲರೂ ಒಂದು ಕಡೆ ಕುಳಿತು ಸ್ಯಾಕ್ಸ್ ತಿನ್ನುತ್ತಿದ್ದೆವು, ಊಟ ಮಾಡುತ್ತಿದ್ದೆವು. ಮಧ್ಯಾಹ್ನ ನಾವು ನಮಾಝ್ ಮಾಡಲು ಹೋಗುವಾಗ ನಮ್ಮ ಕಾಲೇಜ್ ಮೇಟ್ ಗಳು ತಮ್ಮದೇ ತರಗತಿಯಲ್ಲಿ ಅವಕಾಶ ಮಾಡಿಕೊಡುತ್ತಿದ್ದರು. ಅದೊಂದು ನೈಸರ್ಗಿಕವಾಗಿ ನಡೆಯುತ್ತಿದ್ದ ಕ್ರಿಯೆ.‌ಇಂದು ಅದೇ ಚಟುವಟಿಕೆಗಳು ಅಪರಾಧವಾಗಿ ಬದಲಾಗಿದ್ದು ಯಾಕೆ? ಯಾಕೆ ನಾವು ಅಸಹನೀಯವಾಗಿ ವರ್ತಿಸುತ್ತಿದ್ದೇವೆ?.

ಸಿದ್ಧಾಂತಗಳು, ವಿಚಾರಧಾರೆಗಳನ್ನು ಅರ್ಥೈಸಿ ಅವರು ಸ್ವತಃ ಒಪ್ಪಿಕೊಂಡು ಪಾಲಿಸಬೇಕು ವಿನಃ ಇಂತಹ ಬಲವಂತದ ಪ್ರಕ್ರಿಯೆಗಳಿಂದಲ್ಲ ತಾನೇ?. ನಾವು ಮಾಡಿದ್ದೇವೆಂದು ಅವರು ಅವರು ಮಾಡಿದ್ದಾರೆಂದು ನಾವು, ಹೀಗೆ ಜೀವನ ಎಂಬುವುದು ಇತ್ತೀಚ್ಚಿಗೆ ಅಖಾಡವಾಗಿ ಬದಲಾಗಿದೆ. ನಂಬಿಕೆ, ಸ್ನೇಹ, ಪ್ರೀತಿ, ಸೌಹರ್ದತೆಗಳು ಕೊನೆಯುಸಿರೆಳೆಯುವ ಹಂತಕ್ಕೆ ಬಂದು ತಲುಪಿದೆ. ರಟ್ಟೆ ಬಲ, ಹಣ ಬಲ, ರೋಷ, ಪ್ರಚೋದನೆ ಇದೇ ಜೀವನವೇ?

ಯಾರದೋ ಬದುಕಿನಲ್ಲಿ ನುಗ್ಗಿ ನಮ್ಮ ನಿಯಮಗಳನ್ನು ಹೇರಿ ವಿಕೃತ ಆನಂದ ಪಡುವ ಮುನ್ನ ಅದರಿಂದ ಈ ಸಮಾಜಕ್ಕೆ ಆಗುವ ಒಳಿತಾದರೂ ಏನು ಎಂಬುದನ್ನು ನಾವು ಅರಿತಿದ್ದರೆ? ಹಾಗಾಗಲೂ ಈ ವ್ಯವಸ್ಥೆ ಬಿಡುವುದಾರೂ ಹೇಗೆ? ನನ್ನ ಸ್ನೇಹಿತ ಯಾವಾಗಲೂ ಆತ ಓದಿದ ಒಂದು ಪುಸ್ತಕದ ಒಕ್ಕಣೆಯನ್ನು ನನಗೆ ವಿವರಿಸುತ್ತ ಹೇಳುತ್ತಿರುತ್ತಾನೆ.

“ಒರ್ವ ಸೈನಾಧಿಕಾರಿ ತನ್ನ ಸೇನೆಯ ಸೈನಿಕರಿಗೆ ಕನ್ನಡಕ ತೊಡಿಸಿ ಹೋಗಿ ನೀವು ಝೊಂಬಿಗಳನ್ನು ಹೊಡೆದು ಕೊಲ್ಲಬೇಕು ಎಂದು ಕಳುಹಿಸುತ್ತೇನೆ. ಹೀಗೆ ಸೈನಿಕರು ಹೋಗಿ ಝೊಂಬಿಗಳನ್ನು ಹೊಡೆಯುತ್ತಿರುವಾಗ ಒರ್ವ ಸೈನಿಕನ ಕನ್ನಡಕ ಕೆಳಗೆ ಬೀಳುತ್ತದೆ. ಆಗ ಆತನಿಗೆ ತನ್ನೆದುರು ಇರುವವರು ರಾಕ್ಷಸರಲ್ಲ ಮನುಷ್ಯರು ಎಂಬುವಂತೆ ಭಾಸವಾಗುತ್ತದೆ. ತಕ್ಷಣ ಆತ ಸೈನ್ಯಾಧಿಕಾರಿ ಬಳಿ ಬಂದು ಈ ವಿಚಾರ ಪ್ರಸ್ತಾಪಿಸಿದಾಗ ಇಲ್ಲ ಅವರು ಝೊಂಬಿಗಳು ನೀನು ಕೊಲ್ಲು ಹೋಗು ಎನ್ನುತ್ತಾನೆ. ಮತ್ತೆ ಆ ಸೈನಿಕ ಹೋದಾಗ ಆತ ಕನ್ನಡಕ ಧರಿಸದೆ ಅವರನ್ನು ನೋಡುತ್ತಾನೆ. ಅವರೆಲ್ಲರು ಮನುಷ್ಯರಾಗಿರುತ್ತಾರೆ”

ಇವತ್ತು ಪ್ರಸ್ತುತ ನಮ್ಮ ಅವಸ್ಥೆಯೂ ಕೂಡ ಇದೇ ರೀತಿಯಾಗಿದೆ. ಧರ್ಮ-ಧರ್ಮಗಳ ನಡುವೆ ಕಲಹ ಹಬ್ಬಿಸಿ ಇವತ್ತು ಪರಸ್ಪರ ಝೊಂಬಿಗಳಂತೆ ಮಾಡಿಬಿಟ್ಟಿದ್ದಾರೆ. ನಾವು ಅಸಹ್ಯರಾಗಿದ್ದೇವೆ. ಅದರ ಪರಿಣಾಮವಾಗಿ ಮೇಲೆ ವಿವರಿಸಿದ ಎರಡು ಮನಸ್ಥಿತಿಗಳು ವ್ಯಾಪಕವಾಗಿ ಬೆಳೆಯುತ್ತಿದೆ. ಸದ್ಯಕ್ಕೆ ಆ ದ್ವೇಷದ ಕನ್ನಡಕವನ್ನು ಕಳಚುವ ಮಹತ್ತರವಾದ ಜವಾಬ್ದಾರಿ ಮಾತ್ರ ನಮ್ಮ ಬಳಿಯಿದೆ. ಮತ್ತೆಲ್ಲವೂ ಗೌಣ.

ಲೇಖನ: ವೈ.ಎನ್.ಕೆ

Leave a Comment

Your email address will not be published.