ಖಾಸಗೀಕರಣಕ್ಕೆ ಪ್ರಧಾನಿಯ ಒಲವು ಹೆಚ್ಚಾಗುತ್ತಿದೆ, ಸಾಮಾಜಿಕ ನ್ಯಾಯಕ್ಕೆ ಪೆಟ್ಟು ಜೋರಾಗಿ ಬೀಳುತ್ತಿದೆ!

– ಸಂಪಾದಕೀಯ

ಖಾಸಗೀಕರಣವೆಂಬುವುದು ಕೇವಲ ಸಾರ್ವಜನಿಕ ಆಸ್ತಿಗಳ ಹಕ್ಕನ್ನು ಸರಕಾರ‌ ಉಳ್ಳವರಿಗೆ ಬಿಟ್ಟು ಕೊಡುವುದು ಮಾತ್ರವಲ್ಲ. ಈ ದೇಶದಲ್ಲಿ ಅಸಮಾನತೆಯ ಚಂಡಮಾರುತಕ್ಕೆ ತುತ್ತಾಗಿ ಶೋಷಿತರಾಗಿದ್ದ ಸಮುದಾಯಗಳ ಮೀಸಲಾತಿ ವ್ಯವಸ್ಥೆಯ ನಿರ್ನಾಮ ಕೂಡ ಹೌದು!
ಬುಧವಾರ ಪ್ರಧಾನಿ ಮೋದಿ ಉದ್ಯಮ ನಡೆಸುವುದು ಸರಕಾರದ ಕೆಲಸವಲ್ಲವೆಂದು ಖಾಸಗೀಕರಣವನ್ನು ಬಲವಾಗಿ ಸಮರ್ಥಿಸಿದ್ದಾರೆ. ಇದರ ಅರ್ಥ ಸರಕಾರದ ಅಂದರೆ ಸಾರ್ವಜನಿಕರ ಕೈಯಲ್ಲಿದ್ದ ಅದೆಷ್ಟೋ ಸಂಸ್ಥೆಗಳನ್ನು ಖಾಸಗಿ ಸುಪರ್ದಿಗೆ ವಹಿಸುವುದು. ಇದರಿಂದ ಈ ದೇಶದಲ್ಲಿನ ಮೀಸಲಾತಿ ವ್ಯವಸ್ಥೆಗೆ ನೇರವಾಗಿ ಪೆಟ್ಟು ಬೀಳುತ್ತದೆಯೆಂಬುವುದು ಪ್ರತಿಯೊಬ್ಬ ಸಾಮಾನ್ಯನಿಗೂ ಅರ್ಥವಾಗುವ ವಿಚಾರ.
ಬಿಜೆಪಿ ಸಂಘಪರಿವಾರ ಹುಟ್ಟು ಹಾಕಿದ ಕೂಸು. ಅದರ ಸೈದ್ಧಾಂತಿಕ ವಿಚಾರಗಳು ಅತ್ಯಂತ ಫ್ಯಾಸಿಸ್ಟ್ ಧೋರಣೆಯಿಂದ ಕೂಡಿದ್ದು. ಈ ದೇಶದಲ್ಲಿ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಜನರನ್ನು ದಾರಿ ತಪ್ಪಿಸಿ ತನ್ನ ಸಿದ್ಧಾಂತಗಳನ್ನು ಬಿಜೆಪಿಯ ಮುಖಾಂತರ ಜಾರಿಗೊಳಿಸಲು ಯತ್ನಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ದುರದೃಷ್ಟಕರವೆಂದರೆ ಕಣ್ಣ ಮುಂದೆ ಬಿಜೆಪಿ ಈ ದೇಶದಲ್ಲಿ ಅರ್ಥಿಕವಾಗಿ, ಸಾಮಾಜಿಕವಾಗಿ, ಶ್ರೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಕತ್ತನ್ನು ನಾನಾ ರೀತಿಯ ನೀತಿಗಳನ್ನು ಜಾರಿಗೆ ತಂದು ಹಿಸುಕುತ್ತಿದ್ದರೂ ಸರಕಾರದ ಭೀಕರ ನೀತಿಯ ಬಗ್ಗೆ ಪ್ರತಿಭಟಿಸದೆ ಈ ವರ್ಗದ ಬಹುದೊಡ್ಡ ಜನ ಸಂಖ್ಯೆ ಕಣ್ಣು ಮುಚ್ಚಿ ಸರಕಾರದ ಗುಣಗಾನದಲ್ಲಿ ತೊಡಗಿರುವುದು. ಬಿಜೆಪಿ ಮುಸ್ಲಿಮ್ ಸಮುದಾಯವನ್ನು ತೋರಿಸಿ ಅವರ ಕುರಿತು ಇಲ್ಲ ಸಲ್ಲದ ಆರೋಪ ಮಾಡಿ ಒಂದು ಮಿಥ್ಯ ಜಗತ್ತಿನಲ್ಲಿ ಒಂದು ದೊಡ್ಡ ವರ್ಗವನ್ನು ನಿರತವಾಗಿಸಿದೆ. ಅತ್ತ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಇಡೀ ದೇಶದ ಪ್ರಮುಖ ಸಂಸ್ಥೆಗಳನ್ನು ಅಂಬಾನಿ, ಅದಾನಿಯಂತಹ ಬಂಡವಾಳಶಾಹಿಗಳಿಗೆ ನಾಚಿಕೆಯಿಲ್ಲದೆ ಬಹಿರಂಗವಾಗಿ ಅಡವಿಡುತ್ತಿದೆ.
ವಿಮಾನ ನಿಲ್ದಾಣಗಳು, ಇಂಡಿಯಾನ್ ಏರ್’ಲೈನ್ಸ್, ಬಿ.ಎಸ್.ಎನ್.ಎಲ್, ಎಲ್.ಐ.ಸಿ ಹೀಗೆ ಪಟ್ಟಿ ಮಾಡುತ್ತ ಹೋದರೆ ಒಂದ ಎರಡ ಹಲವಾರು ಸಂಸ್ಥೆಗಳ ಖಾಸಗೀಕರಣವಾಗಿದೆ ಮತ್ತಷ್ಟು ಪ್ರಯತ್ನಗಳು ನಡೆಯುತ್ತಿವೆ. ರೈತ ವರ್ಗ ಈ ಬಗ್ಗೆ ಈಗಾಗಲೇ ಎಚ್ಚೆತ್ತು ಪ್ರತಿಭಟಿಸುತ್ತಿದೆ. ಈ ಸರಕಾರಿ ಸಂಸ್ಥೆಗಳು ಖಾಸಗೀಕರಣಗೊಂಡ ತಕ್ಷಣ ಇಲ್ಲಿನ ಮೀಸಲಾತಿಗಳು ರದ್ಧಾಗುವ ವಿಚಾರ ಅರಿಯದೆ ನಾವು ಕೇವಲ ಹಿಂದು-ಮುಸ್ಲಿಮ್ ವಿಚಾರದಲ್ಲಿ ತಲ್ಲಿನರಾಗಿದ್ದೇವೆ.
ಅತ್ತ ಸ್ಟೇಡಿಯಮ್ ಗಳ ಹೆಸರುಗಳು ಜೀವಂತ ಇದ್ದವರ ಹೆಸರುಗಳಿಂದ ಬದಲಾಗುತ್ತಿದೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಹೆಸರನ್ನು ತೆಗೆದುಹಾಕಲಾಗುತ್ತದೆ. ಅಷ್ಟೇ ಅಲ್ಲದೆ ಸ್ಟೇಡಿಯಮ್ ಒಳಗಿನ ಆಸನಗಳ ವ್ಯವಸ್ಥೆಗೆ ಅದಾನಿ ಮತ್ತು ರಿಲಯನ್ಸ್ ಹೆಸರು ಇಡಲಾಗುತ್ತದೆ. ನಾವು ಮಾತ್ರ ಹಿಂದು-ಮುಸ್ಲಿಮ್ ವಿಚಾರಗಳಲ್ಲಿ ತಲ್ಲೀನರಾಗಿದ್ದೇವೆ.
ದೇಶವನ್ನು ಅಭಿವೃದ್ಧಿಯ ಪಥದಲ್ಲಿ ನಡೆಸುತ್ತೇನೆ ಎಂಬ ಶಪಥ ಮಾಡಿ ಜನರಿಂದ ಓಟು ಪಡೆದು ಬಂದ ಪ್ರಧಾನಿ, ಸಾರ್ವಜನಿಕ ಉದ್ಯಮಗಳು ರೋಗ ಗ್ರಸ್ತವಾಗಿದೆ. ಅದನ್ನು ಖಾಸಗೀಕರಣಗೊಳಿಸುವ ಕುರಿತು ನಾಚಿಕೆ ಬಿಟ್ಟು ಮಾತನಾಡುತ್ತಿದ್ದಾರೆ. ಕಳೆಗುಂದಿರುವ ಸಾರ್ವಜನಿಕ ಸಂಸ್ಥೆಗಳನ್ನು ಮತ್ತೆ ಪುನರ್ ಉತ್ತೇಜನಗೊಳಿಸುವುದು ಒರ್ವ ಧೀಮಂತ ನಾಯಕನ ಕರ್ತವ್ಯ. ಆದರೆ ಇಲ್ಲಿ ಕಾರ್ಪೋರೆಟ್ ಕಂಪೆನಿಗಳ ಗುಲಾಮಗಿರಿ ಒಪ್ಪಿ ಮನ ಬಂದಂತೆ ವರ್ತಿಸುತ್ತಿರುವ ಪ್ರಧಾನಿ ಮೋದಿಯವರು ತಮಗೆ ಓಟು ನೀಡಿದ ಹಿಂದುಳಿದ ವರ್ಗಗಳ ಹಿತಾಸಕ್ತಿಗೆ ಕೊಳ್ಳಿ ಇಟ್ಟು‌ ದೇಶ ಸೇವೆಯ ಬದಲು ಕಾರ್ಪೋರೆಟ್ ಗಳ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದನ್ನು ಪ್ರಶ್ನಿಸಲು ಏಳುವ ಅಂದೋಲನಗಳ ಬಾಯಿ ಮುಚ್ಚಲು ಅನೇಕ ಡೋಂಬರಾಟದ ಕಸರತ್ತುಗಳನ್ನು ನಡೆಸಲಾಗುತ್ತದೆ. ಚಳುವಳಿಗಾರರನ್ನು ಭಯೋತ್ಪಾದಕರಂತೆ ಬಿಂಬಿಸಲಾಗುತ್ತದೆ. ನಂತರ ಅವರ ಮೇಲೆ ದೇಶದ್ರೋಹದ ಪ್ರಕರಣ ಜಡಿದು ಕಂಬಿ ಹಿಂದೆ ತಳ್ಳುವ ಕ್ರೂರ ಕ್ರಮಗಳನ್ನು ಸರಕಾರ ಕೈಗೊಳ್ಳುತ್ತಿದೆ. ಈಗಾಗಲೇ ಇದು ಎಲ್ಲ ಚಳುವಳಿಗಳಲ್ಲಿ ಸಾಬೀತಾಗಿದೆ. ರೈತ ಹೋರಾಟವನ್ನು ಖಲಿಸ್ತಾನಿಗಳ ಹೋರಾಟವೆಂದು ಸುಳ್ಳು ಹಬ್ಬಿಸಲು ಯತ್ನಿಸಿದ್ದು ಇದರ ಭಾಗ.
ಮುಖ್ಯವಾಗಿ ಹಿಂದುಳಿದ ವರ್ಗಗಳು, ದಲಿತರು ಮತ್ತು ಅಲ್ಪ ಸಂಖ್ಯಾತರು ಬಿಜೆಪಿ ಸರಕಾರದ ಪ್ಯಾಟರ್ನ್ ಆಫ್ ವರ್ಕ್’ನ್ನು ಅರ್ಥ ಮಾಡಿಕೊಳ್ಳಬೇಕಾಗಿರುವುದು ಅತೀ ಅಗತ್ಯ. ಅದು ಮೊದಲಿಗೆ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ದೇಶದಲ್ಲಿ ಬಹುಸಂಖ್ಯಾತ ಮತ್ತು ಅಲ್ಪ ಸಂಖ್ಯಾತರ ನಡುವೆ ಕಂದಕ ನಿರ್ಮಿಸಲು ಯತ್ನಿಸಿತು. ನಂತರ ತನ್ನ ತರಬೇತುಗೊಂಡ ಕಾರ್ಯಕರ್ತರ ಪಡೆ ಬಳಸಿ ಆಫ್ ಲೈನ್ ಮತ್ತು ಆನ್ ಲೈನ್ ನಲ್ಲಿ ಮುಸ್ಲಿಮ್ ಸಮುದಾಯವನ್ನು ನೇರವಾಗಿ ಗುರಿಯಾಗಿಸಿ ತಪ್ಪು ಕಲ್ಪನೆಗಳನ್ನು ವ್ಯಾಪಕವಾಗಿ ಪ್ರಚುರಗೊಳಿಸಿ ಸಮುದಾಯಗಳು ಅದರಲ್ಲೇ ನಿರತರಾಗಿರುವಂತೆ ನೋಡಿಕೊಂಡರು. ಯಾವಾಗ ಜನತೆ ಹಿಂದು-ಮುಸ್ಲಿಮ್ ವಿಚಾರಗಳಲ್ಲಿ ಹಾಗೂ ಅದಕ್ಕಾಗಿ ತರುವ ಕಾನೂನುಗಳ ಕುರಿತು ಬಿಸಿ ಬಿಸಿ ಚರ್ಚೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೋ ಅದೇ ಸಂದರ್ಭದಲ್ಲಿ ತೋಚಿದ್ದನ್ನೆಲ್ಲ ಖಾಸಗೀಕರಣ ಮಾಡುವ ಮತ್ತು ದೇಶದ ಒಂದು ದೊಡ್ಡ ಜನ ವರ್ಗಕ್ಕೆ ಚಳ್ಳೆ ಹಣ್ಣು ತಿನ್ನಿಸಿ ಕಾರ್ಪೊರೇಟ್ ಗಳಿಗೆ ಈ ದೇಶದ ಪ್ರತಿಷ್ಠಿತ ಸಂಸ್ಥೆಗಳನ್ನು ಮಾರುವಲ್ಲಿ ನಿರತರಾದರು.
ಈ ಸರಕಾರ ಸಂಪೂರ್ಣ ವಿಫಲವಾಗಿದೆ. ಈ ದೇಶದ ಜನರ ಹಿತಾಸಕ್ತಿ ಕಾಪಾಡುವಲ್ಲಿ ಸೋತಿದೆ ಅದಕ್ಕಿಂತ ಮುಖ್ಯವಾಗಿ ಈ ದೇಶದ ಹಿತಾಸಕ್ತಿಗಿಂತ ಅವರಿಗೆ ಕಾರ್ಪೋರೆಟ್ ಕಂಪೆನಿಗಳ ಹಿತಾಸಕ್ತಿ ಮುಖ್ಯ ಎಂಬುವಂತೇ ವರ್ತಿಸುತ್ತಿದೆ. ಅದರ ನಡೆ, ಕಾರ್ಯ ಚಟುವಟಿಕೆಗಳು ಇದನ್ನು ಸಾಬೀತು ಕೂಡ ಮಾಡಿದೆ.
ಇದೀಗ ದೇಶದ ಜನತೆ ಪ್ರಜ್ಞಾವಂತಿಕೆಯೊಂದಿಗೆ ಯೋಚಿಸುವ ಸಮಯ ಮೀಸಲಾತಿ, ಸಾಮಾಜಿಕ ನ್ಯಾಯಗಳು ಉಳಿಯ ಬೇಕಾದರೆ ಈ ದೇಶದ ಪ್ರತಿಷ್ಠಿತ ಸಾರ್ವಜನಿಕ ಉದ್ದಿಮೆ ರಂಗ ಉಳಿಸಿಕೊಳ್ಳಲು ಯತ್ನಿಸಬೇಕು. ಇಲ್ಲದಿದ್ದರೆ ನಾವು ಹಿಂದು-ಮುಸ್ಲಿಮ್ ವಿಚಾರದಲ್ಲಿ ತಲ್ಲೀನರಾಗಿರುತ್ತೇವೆ ಅತ್ತ ಸರಕಾರಗಳು ಧಾರ್ಮಿಕ ಘರ್ಷಣೆಯ ಲಾಭ ಪಡೆದು ಹಿಂದಿನ ಬಾಗಿಲಿನಲ್ಲಿ ಸರಕಾರದ ಸಂಸ್ಥೆಗಳನ್ನು ಮಾರುತ್ತ ಸಾಗುತ್ತದೆ. ನಮಗೆ ಅರಿವಿಗೆ ಬರುವಾಗ ಸಂಸ್ಥೆಗಳು ಅದಾನಿ, ಅಂಬಾನಿಯ ಕೈಯಲ್ಲಿರುತ್ತದೆ. ಆ ಸಂದರ್ಭದಲ್ಲಿ ಮೀಸಲಾತಿ, ಸಾಮಾಜಿಕ ನ್ಯಾಯಗಳು ಕೇವಲ ಮರೀಚಿಕೆಯಾಗಿ ಉಳಿಯಬಹುದು. ಈ ಎಲ್ಲ ಹಿನ್ನಲೆಯಲ್ಲಿ ಮತ್ತೆ ನಾವು ಸಂವಿಧಾನಿಕ ಮೌಲ್ಯಗಳನ್ನು ಅರ್ಥೈಸಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಯೋಚಿಸಬೇಕಾಗಿದೆ. ಅಂಧರಾಗಿ ಆಳುವವರ ಗುಲಾಮರಾಗದೆ ದೇಶದ ಹಿತಾಸಕ್ತಿಗೆ, ಈ ದೇಶದ ಜನರ ಹಿತಾಸಕ್ತಿಗೆ ಪೂರಕವಾಗಿ ಚಿಂತಿಸಿ ಕಾರ್ಯನ್ಮುಖರಾಗಬೇಕಾಗಿದೆ. ಆದರೆ ಆ ಕೆಲಸ ಅಷ್ಟು ಸುಲಭವಲ್ಲ ಫ್ಯಾಸಿಸ್ಟ್ ಪಡೆಗಳು ಅಧಿಕಾರದಲ್ಲಿದ್ದಾಗ ಅದರ ವಿರುದ್ಧದ ಶಕ್ತಿಗಳನ್ನು ಹತ್ತಿಕ್ಕಲು ಅದು ಯಾವುದೇ ಕ್ರಮಕ್ಕೂ ಮುಂದಾಗಬಹುದು. ಆದರೆ ನಾವು ಧೃತಿಗೆಡದೆ ಸಂವಿಧಾನದ ಚೌಕಟ್ಟಿನೊಳಗೆ ಇಂತಹ ಕರಾಳ ಧೋರಣೆಗಳ ವಿರುದ್ಧ ಮಾತನಾಡಲೇ ಬೇಕು ಮತ್ತು ಈ ದೇಶದಿಂದ ಫ್ಯಾಸಿಸ್ಟ್ ಧೋರಣೆಯ ಹಿನ್ನಲೆಯಲ್ಲಿ ಕಾರ್ಯ ಚಟುವಟಿಕೆ ನಡೆಸಲು ಯತ್ನಿಸುವ ಪ್ರತಿ ಪ್ರಭುತ್ವವನ್ನು ದೂರೀಕರಿಸಲು ಪ್ರಯತ್ನಿಸಬೇಕಾಗಿದೆ.

Leave a Comment

Your email address will not be published.