ಯಡಿಯೂರಪ್ಪನವರ ವಿರುದ್ಧ ಕಾರ್ಯತಂತ್ರ ಹೆಣೆಯುವ ಕೆಲಸ ನಾನು ಎಂದಿಗೂ ಮಾಡುವುದಿಲ್ಲ – ಸಿಪಿ ಯೊಗೇಶ್ವರ್

ಅಂಜನಾದ್ರಿ ಬೆಟ್ಟ(ಕೊಪ್ಪಳ): ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ವಿರುದ್ಧ ಕಾರ್ಯತಂತ್ರ ಹೆಣೆಯುವ ಕೆಲಸ ನಾನು ಎಂದಿಗೂ ಮಾಡುವುದಿಲ್ಲ ಎಂದು ಪ್ರವಾಸೋದ್ಯಮ ಇಲಾಖೆ ಸಚಿವ ಸಿ ಪಿ ಯೋಗೇಶ್ವರ್ ಪುನರುಚ್ಛರಿಸಿದ್ದಾರೆ. ಅವರು ಇಂದು ಬೆಳಗ್ಗೆ ಕುಟುಂಬ ಸಮೇತ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗೊಂದಿಯ ಪ್ರಸಿದ್ಧ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಬಳಿಕ ಹೊರಬಂದ ಅವರನ್ನು ಸುದ್ದಿಗಾರರು ಮಾತನಾಡಿಸಿ ನಾಯಕತ್ವ ಬದಲಾವಣೆ ಬಗ್ಗೆ ಕೇಳಿದಾಗ, ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಪದಚ್ಯುತಿಗೊಳಿಸುವ ಕೆಲಸವನ್ನು ನಾವೆಂದಿಗೂ ಮಾಡಿಲ್ಲ, ಮಾಡುವುದೂ ಇಲ್ಲ. ನಾನು ದೆಹಲಿಗೆ ಹೋದಾಗಲೆಲ್ಲಾ ಈ ರೀತಿ ಸುದ್ದಿಯಾಗುತ್ತದೆ, ನಾವು ನಮ್ಮ ಕೆಲಸಕ್ಕೆ, ನಮ್ಮ ಆಂತರಿಕ ಸಮಸ್ಯೆಗಳನ್ನು ವರಿಷ್ಠರ ಬಳಿ ಹೇಳಿಕೊಳ್ಳಲು ಹೋಗುತ್ತೇವೆ, ಆದರೆ ಅದು ಬೇರೆ ರೀತಿಯಲ್ಲಿಯೇ ಸುದ್ದಿಯಾಗುತ್ತದೆ, ನನ್ನನ್ನು ಸುಮ್ಮನೆ ವಿಲನ್ ಮಾಡಬೇಡಿ ಎಂದರು.

ಯಡಿಯೂರಪ್ಪನವರು ನಮ್ಮ ನಾಯಕರು, ಅವರನ್ನು ಮುಟ್ಟಿದರೆ ಸುಟ್ಟುಹೋಗುತ್ತೇವೆ ಎಂದರು. ಇನ್ನು ಪರೀಕ್ಷೆ ಬರೆದಿದ್ದು ಉತ್ತಮ ಫಲಿತಾಂಶ ಬರಲೆಂದು ದೇವರ ಆಶೀರ್ವಾದ ಕೇಳಲು ಬಂದಿದ್ದೀರೋ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ಹಾಗೇನು ಇಲ್ಲ, ಉತ್ತರ ಕರ್ನಾಟಕ ಪ್ರವಾಸದಲ್ಲಿದ್ದೇನೆ, ಹೀಗಾಗಿ ಇಂದು ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ್ದೇನೆ. ಈ ಬೆಟ್ಟವನ್ನು ಪ್ರವಾಸಿ ತಾಣವಾಗಿ ಇನ್ನಷ್ಟು ಅಭಿವೃದ್ಧಿಪಡಿಸಲಾಗುವುದು, ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ ಎಂದರು.

Leave a Comment

Your email address will not be published.