ಯತ್ನಾಳ್-ಯೊಗೇಶ್ವರ್ ರಹಸ್ಯ ಭೇಟಿ!

ವಿಜಯಪುರ: ಆಡಳಿತಾರೂಢ ರಾಜ್ಯ ಬಿಜೆಪಿಯಲ್ಲಿ ಮತ್ತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಇತ್ತೀಚೆಗಷ್ಟೇ ರಾಜ್ಯ ಬಿಜೆಪಿ ಉಸ್ತುವಾರಿ ನಾಯಕ ಅರುಣ್​ ಸಿಂಗ್​ ಬೆಂಗಳೂರಿಗೆ ಬಂದು ಪಕ್ಷದಲ್ಲಿ ಬಂಡಾಯಕ್ಕೆ ಮುಲಾಮು ಹಚ್ಚಲು ಯತ್ನಿಸಿದ್ದರು. ರಾಜ್ಯದಲ್ಲಿ ನಾಯಕತ್ವ ಬದಲಾಣೆಯಿಲ್ಲ ಎಂದು ಘಂಟಾಘೋಷವಾಗಿ ಹೇಳಿದ್ದರು. ಆದರೆ ಬಂಡಾಯ/ ಅತೃಪ್ತಿಗಳು ಇನ್ನೂ ರಾಜ್ಯ ಬಿಜೆಪಿಯಲ್ಲಿ ಮನೆಮಾಡಿದೆ ಎನ್ನಲು ಕೆಲ ದಿಢೀರ್ ಬೆಳವಣಿಗೆಗಳು ಕಂಡು ಬಂದಿವೆ.

ಅತ್ತ ರಾಜಧಾನಿ ಬೆಂಗಳೂರಿಗೆ ಬಂದಿದ್ದ ಶಾಸಕ ರಮೇಶ್ ಜಾರಕಿಹೊಳಿ ಇದ್ದಕ್ಕಿದ್ದಂತೆ ದೆಹಲಿಗೆ ಹಾರಿದ್ದಾರೆ. ರಮೇಶ್ ಮುಂಬೈ ಪ್ಲ್ಯಾನ್‌ ಚೇಂಜ್‌ ಮಾಡಿ, ಬೆಗಳೂರಿಗೆ ಬಂದಿದ್ದು ಯಾಕೆ..? ಯಾರ ಸಲಹೆಯಂತೆ ದೆಹಲಿಗೆ ಮತ್ತೆ ಹೋಗಿದ್ದಾರೆ..? ಇಲ್ಲಿ ಬೆಂಗಳೂರಿನಲ್ಲಿ ಇನ್ನೂ 2 ದಿನ ಉಳಿಯುವ ಯೋಜನೆಯಲ್ಲಿದ್ದ ರಮೇಶ್​ ಜಾರಕಿಹೊಳಿ ದಿಢಿರನೆ ದೆಹಲಿಗೆ ಇದ್ದಕ್ಕಿದ್ದಂತೆ ಹಾರಿದ್ದೇಕೆ ಎಂಬುದಕ್ಕೆ ಉತ್ತರ ಸಿಕ್ಕಿಲ್ಲ.

ಈ ಮಧ್ಯೆ,​ ಸಚಿವ ಸಿ.ಪಿ. ಯೋಗೇಶ್ವರ್ ಅವರು ಶಾಸಕ ಬಸನಗೌಡ ಯತ್ನಾಳ್ ಅವರನ್ನು ಭೇಟಿಯಾಗಿ ರಹಸ್ಯ ಮಾತುಕತೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ.

ಭೇಟಿಯ ವೇಳೆ ಸಚಿವ ಯೊಗೇಶ್ವರಗೆ ಬಸನಗೌಡ ಯತ್ನಾಳ್ ಅವರು ಹೂಗುಚ್ಚ ನೀಡಿ ಸ್ವಾಗತಿಸಿದರು. ಕೆಲ ಕಾಲ ಶಾಸಕ ಯತ್ನಾಳ್ ಹಾಗೂ ಸಚಿವ ಯೋಗೇಶ್ವರ ರಹಸ್ಯವಾಗಿ ಚರ್ಚೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.

ಈ ನಡುವೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಮತ್ತೊಬ್ಬ ನಾಯಕ ಎ.ಹೆಚ್.ವಿಶ್ವನಾಥ್ ಅವರು ಜುಲೈ ತಿಂಗಳಿನಲ್ಲಿ ಎಸ್ಎಸ್ಎಲ್’ಸಿ ಪರೀಕ್ಷೆ ನಡೆಸಲು ಮುಂದಾಗಿರುವ ಸರ್ಕಾರದ ನಿರ್ಧಾರಕ್ಕೆ ಕಿಡಿಕಾರಿದ್ದಾರೆ.

ಸಚಿವರ ಆಪ್ತ ಮೂಲಗಳು ಮಾಹಿತಿ ನೀಡಿರುವ ಪ್ರಕಾರ ಈ ನಾಯಕರಿಗೆ ರಾಷ್ಟ್ರೀಯ ಮಟ್ಟಜ ನಾಯಕರು ಹಾಗೂ ರಾಜ್ಯದ ಕೆಲ ನಾಯಕರ ಬೆಂಬಲವಿದೆ ಎಂದು ಹೇಳಲಾಗುತ್ತಿದೆ.

ಯತ್ನಾಳ್ ಅವರನ್ನು ಭೇಟಿ ಮಾಡಿರುವ ಯೋಗೇಶ್ವರ್ ಅವರು ಈ ಹಿಂದೆ ಮುಖ್ಯಮಂತ್ರಿಗಳ ವಿರುದ್ಧ ಟೀಕೆ ಮಾಡಿದ್ದ ಪಂಚಮಸಾಲಿ ಮಠದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿಗಳನ್ನೂ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ. ಈ ಎಲ್ಲಾ ಬೆಳವಣಿಗೆಗಳು ಇದ್ದಕ್ಕಿದ್ದಂತೆ ನಡೆದಿದ್ದು, ರಾಜ್ಯ ಬಿಜೆಪಿಯಲ್ಲಿ ತಳಮಳವನ್ನು ಶುರು ಮಾಡಿದೆ.

Leave a Comment

Your email address will not be published.