ರೈತ ಪ್ರತಿಭಟನೆಗೆ ದೇಶದ ಪ್ರತಿ ಗ್ರಾಮದಿಂದ ಬೆಂಬಲ ವ್ಯಕ್ತವಾಗಬೇಕು

ಕೇಂದ್ರ ಸರಕಾರ ಅವೈಜ್ಞಾನಿಕ ವಾಗಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಧಿಕ್ಕರಿಸಿ ಜಾರಿಗೆ ತಂದ ರೈತ ವಿರೋಧಿ ಮಸೂದೆಯನ್ನು ವಿರೋಧಿಸಿ ಅನ್ನದಾತರು ದೆಹಲಿಯಲ್ಲಿ ಎಸಿ ರೂಮಿನಲ್ಲಿ ಕೂತಿರುವ ಅಧಿಕಾರಿಶಾಹಿಗಳ ಎದೆ ನಡುಗಿಸಿದ್ದಾರೆ.

ಹರ್ಯಾಣ, ಪಂಜಾಬ್, ಉತ್ತರ ಪ್ರದೇಶ, ಕೇರಳ,ಉತ್ತರಾಖಂಡ ಮತ್ತು ರಾಜಸ್ತಾನದ ಸೇರಿದಂತೆ ಹಲವು ರಾಜ್ಯಗಳಿಂದ ಬಂದ ಸಾವಿರಾರು ರೈತರು ಕೇಂದ್ರ ಸರಕಾರದ ನೀತಿಯ ವಿರುದ್ಧ ನೂರಾರು ಕಿ.ಲೋ ಮೀಟರ್ ನಡೆದು ಮಸೂದೆಯ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಅವರ ಹೆಸರಿನಲ್ಲಿ ಅಧಿಕಾರಕ್ಕೇರಿದ ಗದ್ದುಗೆಯ ವಕ್ತಾರರು ಪೊಲೀಸರ ಮುಖೇನ ಹತ್ತಿಕ್ಕುವ ಪ್ರಯತ್ನ ನಡೆಸಿದರು. ಬಡ ರೈತರ ಮೇಲೆ ಅಶ್ರುವಾಯು ಸಿಡಿಸಿ, ಜಲ ತೋಪುಗಳನ್ನು ಬಳಸಿ, ಲಾಠಿ ಪ್ರಹಾರದ ಮೂಲಕ ಹೊಡೆದೊಡಿಸುವ ಪ್ರಯತ್ನ ಮಾಡಲಾಯಿತು. ಮಣ್ಣಿನ ಮಕ್ಕಳಾದ ರೈತರು ಯಾವುದಕ್ಕೂ ಅಂಜದೆ ಪೊಲೀಸ್ ಬ್ಯಾರಿಕೇಡ್’ಗಳನ್ನು ಹೂ ಹಾರವನ್ನಾಗಿಸಿ ದೆಹಲಿಗೆ ತಲುಪಿದರು. ರೈತರ ಪ್ರತಿರೋಧದ ಮುಂದೆ ಅಧಿಕಾರದ ಸೊಕ್ಕು ಮುರಿಯಿತು. ಪ್ರತಿಭಟನೆಗೆ ಅವಕಾಶ ಕಲ್ಪಿಸಬೇಕಾಯಿತು. ಲಾಠಿಯೆತ್ತಿದ ಖಾಕಿ ಪ್ರತಿಭಟನಾಕಾರರನ್ನು ಪ್ರತಿಭಟನ ಸ್ಥಳದವರೆಗೆ ಎಸ್ಕೋರ್ಟ್ ಮಾಡಬೇಕಾದ ಅನಿವಾರ್ಯ ಉಂಟಾಯಿತು. ಅಲ್ಲೇ ಸರಕಾರ ಸೋತಿತ್ತು.

ರೈತರು ಬೆಳೆಯುವ ಬೆಳೆಯೇ ನಮ್ಮ ಆಹಾರ. ಅವರು ಬಿತ್ತದಿದ್ದರೆ ನಾವು ಹಸಿವಿನಿಂದ ಸಾಯಬೇಕಾಗಬಹುದು. ಆದರೆ ಅನ್ನದಾತರ ಅನ್ನ ಕಸಿಯಲು ಹೊರಟಿರುವ ಕೇಂದ್ರ ಸರಕಾರದ ನಡೆಯ ವಿರುದ್ಧ ಪ್ರತಿಯೊಬ್ಬ ಭಾರತೀಯ ಸಿಡಿದೇಳಬೇಕು. ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ದೇಶದ ಪ್ರತಿ ಗ್ರಾಮದಿಂದಲೂ ಬೆಂಬಲ ವ್ಯಕ್ತವಾಗಬೇಕಿದೆ. ಇದು ಯಾವುದೇ ಪಕ್ಷದ ಪ್ರತಿಭಟನೆಯಲ್ಲ. ಇದು ಅಧಿಕಾರಶಾಹಿ, ರೈತ ವಿರೋಧಿ ಸರಕಾರದ ವಿರುದ್ಧದ ಕೂಗು. ಬೂಟು ಸೂಟಿನ ಮುಂದೆ ಅನ್ನದಾತರರನ್ನು ಮಂಡಿಯೂರಿಸುವಂತೆ ಮಾಡುವ ರೈತ ವಿರೋಧಿ ನೀತಿಯ ವಿರುದ್ಧದ ಕೂಗು.

ಅಧಿಕಾರಶಾಹಿಗಳ ಸೊಕ್ಕು ಮುರಿದು ರೈತ ವಿರೋಧಿ ಮಸೂದೆಗಳನ್ನು ಹಿಂಪಡೆದ ನಂತರವಷ್ಟೇ ದೇಶವಾಸಿಗಳು ವಿರಮಿಸಬೇಕು. ರೈತರ ನೋವು ನಾಗರಿಕ ಸಮಾಜದ ನೋವಾಗಿ ಬದಲಾಗಬೇಕು. ಅವರು‌ ಸಾವಿರಾರು ಮೈಲು ನಡೆದು ದಾಖಲಿಸಿದ ಪ್ರತಿಭಟನೆಗೆ ಅರ್ಥ ಬರಬೇಕಾದರೆ, ಪ್ರಜಾಪ್ರಭುತ್ವದ ಮೌಲ್ಯ ಎತ್ತಿ ಹಿಡಿಯಬೇಕಾದರೆ ಇಡೀ ದೇಶ ರೈತ ಬಾಂಧವರ ಹೆಗಲಿಗೆ ಹೆಗಲು ಸೇರಿಸಿ ನಿಲ್ಲಬೇಕಾಗಿದೆ.

– ಸಂಪಾದಕ

Leave a Comment

Your email address will not be published.